ಮಾಸದ ಸ್ವಪ್ನ ಗುಹೆ..

ಕಾರ್ಗತ್ತಲು…!

 ಬೆಳಕಿನ ಹಬ್ಬದಲ್ಲೂ ಕಾಡಿದ ಕನಸು..


      ಎಲೆಗಳ ಸಂಧಿಯಿಂದ ಇಣುಕುತ್ತಿದ್ದ ಸೂರ್ಯ ಮೆಲ್ಲನೆ ನನ್ನನ್ನು ನಿದ್ದೆಯಿಂದ ಎಚ್ಚರಿಸಲು ಯತ್ನಿಸುತ್ತಿದ್ದ. ಸೂರ್ಯನ ಪ್ರಯತ್ನಕ್ಕೆ ಸ್ಪಂಧಿಸಿ ಮಲ್ಲಗೆ ಕಣ್ಣು ಬಿಟ್ಟೆ. ಅದೊಂದು ನಾನೆಂದೂ ಕಾಣದ ಜಗತ್ತು.. ಅಲ್ಲಿ ಕತ್ತಲು ಹಾಗೂ ಬೆಳಕಿನ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಿದ್ದದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ನಸುಕು ಬೆಳಕಿನಲ್ಲೂ ಸಣ್ಣದೊಂದು ಕಾಲ್ನಡಿಗೆಯ ದಾರಿ ಕಂಡೆ. ನಿದ್ದೆಗಣ್ಣಿನಲ್ಲಿದ್ದ ನನಗೆ ಎಲ್ಲಿದ್ದೀನಿ ಎಂಬ ಅರಿವು ಬರಲು ಬಹಳ ಸಮಯ ಹಿಡಿಯಿತು.

ಕೆಲ ಹೊತ್ತಿನ ನಂತರ ನನ್ನನ್ನು ನಾನು ಎಚ್ಚರಿಸಿಕೊಂಡು ನಿಧಾನವಾಗಿ ಮೇಲೆದ್ದೆ. ಏನು ಮಾಡಬೇಕೊ ತಿಳಿಯದೇ ನನ್ನ ಕಣ್ಣಾಲಿಗಳು ಸುತ್ತಲೂ ಒಮ್ಮೆ ನೋಡಿದವು.

ದಾರಿ ಸಾಗಿದಂತೆ ಅಕ್ಕ-ಪಕ್ಕ ನಿಂತಿದ್ದ ಗಿಡ ಮರಗಳು ನನ್ನನ್ನು ಸ್ವಾಗತಿಸುತ್ತಿದ್ದವು. ದಾರಿಯುದ್ದಕ್ಕೂ ಎದುರಾದ ಪ್ರಾಣಿ-ಪಕ್ಷಿಗಳು ನನ್ನನ್ನೇ ದಿಟ್ಟಿಸಿ ನೋಡುತ್ತ ಮೌನವಹಿಸಿದ್ದವು ಗೊಂಬೆಗಳಂತೆ. ಹಾದಿಯೂದ್ದಕ್ಕೂ ಗಿಡ-ಮರಗಳೇ ಜೊತೆಯಾಗಿದ್ದವು.. ನಡೆದಷ್ಟು ದೂರ ಮನದಲ್ಲೇನೊ ಭಯ-ಆತಂಕ. ನನ್ನ ಎದೆ ಬಡಿತ ನನಗೇ ಸ್ಪಷ್ಟವಾಗಿ ಕೇಳುತ್ತಿತ್ತು. ಎಷ್ಟು ಸಾಗಿದರೂ ದಾರಿ ಮಾತ್ರ ಸವೆಯಲಿಲ್ಲ. ನಡೆದು ನಡೆದು ಇನ್ನೂ ಎಷ್ಟು ದೂರ ಸಾಗಬೇಕೋ ಎಂಬ ದುಗುಡ-ದುಮ್ಮಾನದಿಂದ ಮುಖ ಸಣ್ಣಗಾಯ್ತು. ಅಷ್ಟರಲ್ಲೇ ನಾ ನಡೆಯುತ್ತಿದ್ದ ದಾರಿ ಬಂಡೆಗಳ ನಡುವೆ ಸಾಗಿತ್ತು. ದಾರಿ ಕಂಡಂತೆ ನಡೆಯುತ್ತಲೇ ಇದ್ದೆ....


ಮುಂದೊಂದು ಗುಹೆ ಕಂಡಿತು. ಅದರೊಳಗೆ ನಡೆಯಲು ಮುಂದಾದೆ. ಕಾರ್ಗತ್ತಲೇ ತುಂಬಿದ್ದ ಆ ಗುಹೆಯೊಳಗೆ ಇದುವರೆಗೂ ಯಾರೂ ಪ್ರವೇಶಿಸಿದಂತೆ ತೋರಲಿಲ್ಲ. ಆ ನೆಲಕ್ಕೆ ಸೂರ್ಯನ ಕಿರಣಗಳು ತಾಗಿದಂತಿರಲಿಲ್ಲ. ನೀರಿನ ಸ್ಪರ್ಶವೂ ಆಗಿತ್ತೋ ಇಲ್ಲವೋ. ಗಾಳಿ, ಕತ್ತಲು ಎರಡಕ್ಕೆ ಪ್ರವೇಶಿಸುವ ಅವಕಾಶವಿದ್ದಿದ್ದು ಎನಿಸುತ್ತದೆ. ಅದರೊಳಗೆ ಹೋಗುತ್ತಿದ್ದಂತೆ ಮತ್ತೆಂದೂ ಹೊರ ಬರಬೇಕು ಎಂದನಿಸಲಿಲ್ಲ. ಸುತ್ತಲೂ ಕತ್ತಲೆ ತುಂಬಿದ್ದರೂ ಆ ಒಂಟಿ ಪಯಣ ಮುಗಿಸಬೇಕೆಂದು ಮನಸಾಗಲಿಲ್ಲ..

ಆದರೆ, ಅಷ್ಟರಲ್ಲಿ ಇದ್ದಕ್ಕಿದ್ದಂತೆ ಕಣ್ಣ ಹನಿಗಳು ಒಟ್ಟು ಗೂಡಿ ಕಿವಿ ಆಲಿಗಳನ್ನು ಸೋಕಿದೊಡನೆ ಥಟ್ಟನೆ ಎಚ್ಚರವಾಯ್ತು. ತತ್ ಕ್ಷಣವೇ ಓಹ್ ಇದು ಕನಸು ಎಂದುಕೊಂಡೆ.. ಆದ್ರೆ ಆ ಜಗತ್ತಿನಿಂದ ಹೊರ ಬರಲು ಬಹಳಷ್ಟು ಕಾಲ ಬೇಕಾಯ್ತು. ಆಗ ಬಾರದ ಮೆಳೆಗೆ ಮೈಯೊಡ್ಡಿ ನಿಂತತೆ ದೇಹ ಬೆವರಲ್ಲೆ ಮಿಂದಿತು. ಫ್ಯಾನ್ ಗಾಳಿಗೂ ಜಗ್ಗದ ಶೆಕೆ ಅದು. ಯಾರೂ ಇಲ್ಲದ ಆ ಘಳಿಗೆ ಯಮನೇ ಬರುತ್ತಿರುವಂತೆ. ಗದ್ಗ ಕಂಠದಿಂದ ಯಾರನ್ನೋ ಕರೆಯಲು ಮನಸು ಹಾತೊರೆಯುತ್ತಿದ್ದರೂ, ಕರೆವುದಾರನ್ನು ಅನ್ನೋದೆ ಗೊತ್ತಾಗಲಿಲ್ಲ..

ಅದೆಷ್ಟೋ, ದಿನ ಈ ಸ್ವಪ್ನದ ಹಿಂದೆ ಮನಸ್ಸು ಪದೇ ಪದೇ ಹೆಜ್ಜೆ ಇಟ್ಟಿದ್ದಿದೆ. ಒಬ್ಬಳೆ ಇದ್ದಾಗಲೆಲ್ಲ ಆ ಕತ್ತಲ
ದಾರಿ ನನ್ನನ್ನು ಬಾ ಎಂದು ಪುನಃ ಪುನಃ ಕರೆದಿದ್ದಿದೆ.  ಗರ್ಭಗುಡಿಯಂತಿದ್ದ ಕಾರ್ಗತ್ತಲ ಆ ಗುಹೆ ನನ್ನನ್ನು ಈಗಲೂ ಸೆಳೆಯುತ್ತಿದೆ. ಕನಸಿನಲ್ಲಿ ಕಂಡ ಆ ಮೌನದ ಕ್ಷಣಗಳು ಈಗಲೂ ಅಚ್ಚಳಿಯದಂತೆ ಹಾಗೇ ಮನದಲ್ಲಿ ಉಳಿದಿದೆ.

ಕೆಲ ಕನಸುಗಳೇ ಹಾಗಲ್ಲವೇ ನಮ್ಮನ್ನು ನಮಗರಿಯದ ಯಾವುದೊ ಒಂದು ಲೋಕಕ್ಕೆ ಕರೆದೊಯ್ದು ಬಿಡುತ್ತೆ. ಅಂಥ ಸ್ವಪ್ನಗಳು ಪದೇ ಪದೇ ಕಾಡುತ್ತಿರುತ್ತವೆ. ಈ ಬೆಳಕಿನ ಹಬ್ಬದಲ್ಲೂ ಕಾಡುವ ಕಾರ್ಗತ್ತಲ್ಲ ಆ ಸ್ವಪ್ನಕ್ಕೆ ವರುಷ ತುಂಬಿದ ಹರುಷ; ಇಂದಿಗೂ ಮಾಸದ ಕನಸಿನ ಗುಹೆಗೆ ಇಂದು ಹಚ್ಚಿದ ಹಣತೆಯೇ ಬೆಳಕಾಗಲಿ.

Comments