ಮಹದಾಯಿ ಹೋರಾಟ; ಅಂದಿನಿಂದ ಇಂದಿನವರೆಗೆ

ಅಂದಿನಿಂದ ಇಂದಿನವರೆಗೆ
ನೀರಿಗಾಗಿ ನಿಲ್ಲದ ಹೋರಾಟ; ಏನಿದು ಮಹದಾಯಿ ವಿವಾದ..?





ರಾಜ್ಯದಲ್ಲಿ ಸರ್ಕಾರಗಳು ಬದಲಾದವು, ನೂರಾರು ಹೊಸ ಹೊಸ ಯೋಜನೆಗಳು ಜಾರಿಗೆ ಬಂದವು. ನೊರೆಂಟು ಭಾಗ್ಯಗಳ ಸುರಿಮಳೆಯೇ ಹರಿದಿವೆ. ಇಷ್ಟಾದರೂ ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕ ರೈತರ ದಶಕಗಳ ಒಕ್ಕೊರಲ ಕೂಗು ಮಾತ್ರ ಯಾರಿಗೂ ಕೇಳುತ್ತಿಲ್ಲ.

ಗೋವಾ ರಾಜ್ಯದ ಜೀವನದಿ ಮಾಂಡೋವಿ(ಮಹದಾಯಿ). ಈ ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳೇ ಕಳೆದಿದೆ. ಹನಿ ನೀರಿಗಾಗಿ ಉತ್ತರ ಕಕ್ನಾಟಕ ಭಾಗದ ಸಾವಿರಾರು ರೈತರು ದಶಕಗಳಿಂದ ಹೋರಾಡುತ್ತಲೇ ಇದ್ದಾರೆ. ನೂರಾರು ರೈತರು ತೊಟ್ಟು ನೀರಿಗಾಗಿ ಪ್ರಾಣ ಕೂಡ ಬಿಟ್ಟಿದ್ದಾರೆ. ಆದರೆ ಈ ಹೊತ್ತಿಗೂ ಈ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈಗಾಗಲೇ 850ಕ್ಕೂ ಹೆಚ್ಚು ದಿನಗಳಿಂದ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಿರಂತರವಾಗಿ ಪ್ರತಿಭಟನಾ ಧರಣಿ ನಡೆಯುತ್ತಿದೆ. ಆದರೆ ಇದ್ಯಾವುದೂ ರಾಜಕಾರಣಿಗಳ ಕಣ್ಣಿಗೆ ಕಾಣುತ್ತಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಸ್ಯೆ ಇಥ್ಯರ್ಥ ಪಡಿಸೋದಾಗಿ ಹೇಳಿ ಉತ್ತರಕರ್ನಾಟಕದ ಭಾಗದ ಜನರ ಮೂಗಿಗೆ ಬಿಜೆಪಿ ತುಪ್ಪ ಸವರಿದ್ದಾರೆ. ಹೀಗಾಗಿ ಕಳೆದ ಮೂರು ದಿನಗಳಿಂದ ಉತ್ಚರ ಕರ್ನಾಟಕ ಭಾಗದ ರೈತರು ಬೆಂಗಳೂರಿನ ಬಿಜೆಪಿ ಕಚೇರಿ ಎದುರು ಧರಣಿ ಮಾಡ್ತಿದ್ದಾರೆ. ಈಗ ಎದ್ದಿರೋ ಪ್ರಶ್ನೆ ಒಂದೆ.. ಹಗಲು ರಾತ್ರಿ ಎನ್ನದೆ ಮನೆ-ಮಠ, ಗಂಡ-ಮಕ್ಕಳು, ಊಟ-ನಿದ್ದೆ ಬಿಟ್ಟು ಧರಣಿ ಮಾಡುತ್ತಿರೋ ಅಮಾಯಕ ಜನರಿಗೆ ನ್ಯಾಯ ಸಿಗುತ್ತಾ..? ಮಹದಾಯಿ ಸಮಸ್ಯೆ ಬಗೆ ಹರಿಯುತ್ತಾ ಅನ್ನೋದು.. ಹನಿ ನೀರಿಗಾಗಿ ಊರು ಬಿಟ್ಟು ಊರಿಗೆ ಬಂದ ರೈತರ ಅಳಲು ಕೇಳೋಕೆ ಈ ಹೊತ್ತಿಗೂ ಜನಪ್ರತಿನಿಧಿ ಅನಿಸಿಕೊಂಡ ಯಾವೊಬ್ಬ ಮಹಾಪುರುಷನೂ ಬಂದಿಲ್ಲ. ಕುಡಿಯುವ ನೀರಿಗಾಗಿ ಹೋರಾಟ ನಿಂತಿಲ್ಲ, ಜನರ ದಾಹವೂ ತೀರಿಲ್ಲ.

ಅಷ್ಟಕ್ಕೂ ಏನಿದು ಮಹದಾಯಿ ಹೋರಾಟ..?

ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮಘಟ್ಟದ ಜಂಬೋತಿಯಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿನಿಂದ ಈ ನದಿಯನ್ನು ಕರೆಯಲಾಗುತ್ತೆ. ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ.. ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ.


ಇಂದಿಗೂ ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಹತ್ವದ ಯೋಜನೆಯೊಂದನ್ನು ರೂಪಿಸಿತು. ಅದೇ ಕಳಸಾ-ಭಂಡೂರಾ ನಾಲೆ ಯೋಜನೆ. 

ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದವೇನು..? 

1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಗುಂಡೂರಾವ್‍ ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿ ಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ.

ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. 1989ರಲ್ಲಿ ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು. ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.

ಈ ಸಂಬಂಧ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.

ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎಂಬ ವಾದ ಮುಂದಿಟ್ಟಿತು.

ನಂತರ 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ತಂಡವನ್ನು  ನೇಮಕ ಮಾಡಲಾಯ್ತು. 2014ರಲ್ಲಿ ನ್ಯಾಯಾಧಿಕರಣ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಿದ್ಧ ಪಡಿಸಿತು. ಇಲ್ಲಿ ತನಕ ತಾಳ್ಮೆಯಿಂದಿದ್ದವರು 2015ರ ಜೂನ್​ನಿಂದ ಮತ್ತೆ ಜನರ ಹೋರಾಟ ಆರಂಭವಾಯ್ತು. 2016ರಲ್ಲಿ ಗದಗ ನರಗುಂದ, ಧಾರವಾಡದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆಗೆ ನೋವಿನ ವರ್ಷ ಶುರುವಾಯ್ತು.. ಪ್ರತಿಭಟನೆ ಕಿಚ್ಚಿಗೆ ಉತ್ತರ ಭಾಗದ ಜನರು ನಲುಗಿ ಹೋದರು.


ಇದೇ ವರ್ಷ ಜುಲೈ 27ರಂದು ನ್ಯಾಯಾಧೀಕರಣದಿಂದ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರವಾಗಿ ಆದಏಶ ಹೊರ ಬಂತು. ಆದಏಶಕ್ಕೆ ಕಂಗಾಲಾದ ರೈತರು ಜುಲೈ 28ರಂದು ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಿದರು. ಹೋರಾಟದ ಧಗೆ ಉರಿದಂತೆ ಆಗಸ್ಟ್ 08ರಂದು ಧಾರವಾಡದ ಯಮನೂರಿನಲ್ಲಿ ರೈತರ ಮೇಲೆ ಲಾಠಿ ಚಾರ್ಜ್‌ ನಡೆಸಲಾಯ್ತು. ಈ ಸಂಬಂಧ 6 ಪೊಲೀಸ್ ಪೇದೆಗಳನ್ನು  ಅಮಾನತು ಮಾಡಲಾಯ್ತು. ಮಹದಾಯಿಗೆ ಸಂಬಂಧಿಸಿ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ, ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಕರೆದೊಯ್ಯವ ನಿರ್ಧಾರ ಹೀಗೆ ಯೋಜನೆ ಜಾರಿಗೆ ಪ್ರಯತ್ನಗಳು ನೆಡೆದವು. ಸೆಪ್ಟೆಂಬರ್ 02ರಂದು ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ಸಲಹೆ ನೀಡಿತು. ಇದನ್ನು ಅಷ್ಟೇ ಸೌಹಾರ್ದತೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.

2017ರ  ಫೆಬ್ರವರಿ 15ರಂದು ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಹೂಡಿರುವ 94 ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯಿತು. ಅಲ್ಲದೇ ಮಹಾದಾಯಿ ನದಿ ವಿವಾದವನ್ನು ಪರಸ್ಪರ ಸೌಹಾರ್ದಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಜುಲೈ 18ರಂದು ಗೋವಾ ಸರ್ಕಾರ ತಿರಸ್ಕರಿಸಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?

ಈ ಬೆಳವಣಿಗೆಗಳ ನಡುವೆ ಬಿಎಸ್ ವೈ ಸಮಸ್ಯೆ ಇಥ್ಯರ್ಥಪಡಿಸುವುದಾಗಿ ಮಾತು ನೀಡಿದ್ದರು. ಆದರೆ ಮಾತು ಈಡೇರಿಸೋದಿರಲಿ, ಧರಣಿ ನಡೆಸುತ್ತಿರುವವರನ್ನು ನೋಡಲು ಸಹ ಬಂದಿಲ್ಲ.. ಈಗ ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರೆದಿದೆ. ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದ ಬಗೆಹರಿಯುವ ಆಶಾಭಾವನೆ ಹುಸಿಯಾಗಿದೆ.

Comments