ಹೀಗೊಬ್ಬ ಪ್ರೇಮಿ..

ಚಡಪಡಿಕೆ...

ತರುವಾಯ,
ಕ್ಷೇಮ.
ಅವರು, ಅತ್ತ್ಯಾಪ್ತರೂ ಕ್ಷೇಮ ಎಂಬ ಆಶಾ ಭಾವದೊಂದಿಗೆ.
ಪ್ಲೀಸ್ ಸಿಗೋಣ....

ಈಗ್ಗೆ... ಮೂರ್ನಾಲ್ಕು ದಿನಗಳ ಹಿಂದೆ ಒಬ್ಬರನ್ನು ಭೇಟಿಯಾಗಿ ಬಂದೆ. ನನ್ನ ಅತ್ತ್ಯಾಪ್ತರೊಬ್ಬರು ಅವರಿಗೂ ಅತ್ತ್ಯಾಪ್ತರಾಗಿರುವರು. ಈ ಮಧ್ಯಸ್ಥಿಕರು ವಾರದ ಕೆಳಗೆ ನಮ್ಮಿಬ್ಬರನ್ನೂ  ಪರಿಚಯಿಸಲು ಮೊದಲೊಂದೆರಡು ಸಲ ಪ್ರಯತ್ನಿಸಿದ್ದರೂ ವಿಫಲವಾಗಿತ್ತು. ರಾತ್ರಿ ಒಂಬತ್ತು ಮೂವತ್ತರ ಸಮಯ ಊಟಕ್ಕೆ ಜೆ.ಪಿ.ನಗರದ ಅಕ್ಕಿ ರೊಟ್ಟಿ-ಕೀಮಾ ಚಪ್ಪರಿಸುತ್ತಿದ್ದ ಮಧ್ಯದಲ್ಲಿ ಅತ್ತ್ಯಾಪ್ತರ ಫೋನು ರಿಂಗಣಿಸಿತ್ತು,     

 ಅತ್ತ ಕಡೆಯಿಂದ ಅವರು "ಬನ್ನಿ ಸಿಗೋಣ" ಅಂದ್ರಂತೆ ಅತ್ತ್ಯಾಪ್ತರು ಕೈ ತೊಳೆದುಕೊಂಡು, ಅವರು ಸಿಗ್ತಾರಂತೆ ಗಾಡಿ ತಿರಗ್ಸಿ ಅಂದ್ರು. ಕಣ್ಣಗಲಿಸಿ ಹ್ಙಾಂ!!, ನನಗೆ ಗಾಬರಿಯಾದಷ್ಟೇ ಆಶ್ಚರ್ಯ, ಆತಂಕದ ಜೊತೆಗೆ ಭೇಟಿಯಾಗುವ ಕೌತುಕ ಎದೆಗೊತ್ತುತ್ತಿತ್ತು. ಅವರು ಎರಡು ವರ್ಷಗಳ ಹಿಂದೆ ಮುಖಾ-ಮುಖಿಯಾಗಿದ್ದರೂ ನಾವಿಬ್ಬರೂ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಹಾಂ? ಹುಂ! ಎಂದು ನಗುಮುಖದೊಂದಿಗೆ ಒಬ್ಬರಿಗೊಬ್ಬರು ಬೆನ್ನು ತೋರಿಸಿದ್ದೆವು.  

ಅದೇನೋ?... ಭೇಟಿಯಾಗುವ ಜಾಗದೆಡೆಗೆ ಗಾಡಿ ಓಡಿದಂತೆಲ್ಲಾ ಮನಸ್ಸು ಭಾರವಾಗುತ್ತಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಸಮಾನ ಮನಸ್ಕರು ಭೇಟಿಯಾದಾಗ ಹುಚ್ಚು ಮನಸ್ಸಿಗೊಂದು ಮದ್ದು ಕೊಡಿಸಿದ ಹಾಗೆ. ಅದರಲ್ಲೂ, ಭೇಟಿಯಾಗುವವರು ಕ್ರಿಯಾಶೀಲಿಗರು!. ಚಿಕ್ಕವರಾದರೂ ಪ್ರೇರಕರು!.  ನಮ್ಮಿಬ್ಬರ ಮಧ್ಯದ ಅತ್ತ್ಯಾಪ್ತರು ಅವರಲ್ಲೂ ನನ್ನನ್ನು ಪರಿಚಯ ಮಾಡಿಸುವ ಒತ್ತಾಯಪಡಿಸುವ ಒಂದು ಒತ್ತಾಯ ಇರಿಸಿಕೊಂಡಿದ್ದರೋ-ಏನೋ?! ನನ್ನಲ್ಲೂ ಭೇಟಿಯಾಗುವ ಹಂಬಲದ ಹುಡಿ ಹಾರಿಸಿದ್ದರು.

ಈ ಕ್ರಿಯಾಶೀಲರು ವಿಭಿನ್ನರಾಗಿರುತ್ತಾರೆ. ಕೆಲವರು ಸೌಮ್ಯವಾದಿಗಳಾದರೆ, ಕೆಲವರಲ್ಲಿ ಚತುರೋಕ್ತಿಯ ಜೊತೆಗೆ ಬೆಡಗು ಹೊಂದಿದವರಾಗಿರುತ್ತಾರೆ. ಇನ್ನೂ ಕೆಲವರಲ್ಲಿ ವಿಲಕ್ಷಣತೆ ಮತ್ತು ವಕ್ರತೆ ಇದ್ದರೆ, ಕೆಲವರು ಭಾವುಕರು, ಅಕಾರಣ ಇಷ್ಟವಾಗದವರು. ಕೆಲವರು ಸುಂದರ ಮನಸ್ಸಿನವರು ಮತ್ತು ಕರುಣಾಮಯಿಗಳು. ಭೇಟಿಯಾಗುವವರ ಹಿನ್ನೆಲೆ ಪರಿಗಣಿಸಿದರೆ ಕೆಲವರು ವರ್ಣರಂಜಿತರು, ಕೆಲವರು ಬೋರು ಹೊಡೆಸುವವರೂ ಇರಬಹುದು ಎಂದುಕೊಂಡೆ.

ಭೇಟಿಯಾಗುವ ಸ್ಥಳ ತಲುಪುತ್ತಿದ್ದಂತೆಯೇ ಅವರು ಹೊರಗಡೆ ಬಂದು ಅತ್ತ್ಯಾಪ್ತರೊಡನೆ ಹರಟಲು ಶುರುವಿಟ್ಟುಕೊಂಡರು. ನಾನು ಪಾರ್ಕಿಂಗ್ ಹುಡುಕಿ ಗಾಡಿ ಮೇಲೆಯೇ ಕೂತಿದ್ದೆ ಅತ್ತ್ಯಾಪ್ತರು ಕೂಗಿ ಕರೆದು ಅವರ ಮತ್ತು ನನ್ನ ಕೈ-ಕೈ ಕುಲುಕಿಸಿದರು. ಅದಾದಂತೆ ಹೆಜ್ಜೆಗಳು ಹಿಂಬದಿ ರಸ್ತೆಯ ಮಗ್ಗುಲಿನ ಕ್ಯಾಂಟೀನಿನೊಳಕ್ಕೆ ಹೊಕ್ಕವು. ಪರಿಚಯವಾದವರು ಪ್ರಾಮಾಣಿಕರು. ಅನಿಸಿದ್ದನ್ನು ಹೆಳುವವರು. ಹಾಸ್ಯ ಪ್ರಾದ್ನ್ಯರು. ವಿಚಾರ ದಿಕ್ಕನ್ನೇ ಬದಲಿಸಬಲ್ಲವರು. ನಂಬಿಕೆ ಸತ್ಯವನ್ನು ಸಾಬೀತುಪಡಿಸುವವರು. ಸ್ವಲ್ಪ ಕುಳ್ಳರು. ಓದುವವರು. ಬರೆಯುವವರು. ಆಡಂಬರ, ಬರ್ಕಾಸ್ತು ಮಾಡಬಾರದೆನ್ನುವವರು. ಪ್ರದರ್ಶಕರಂತೂ ಅಲ್ಲವೇ ಅಲ್ಲ. ನೋಡಿದ ಮೊದಲನೇ ದೃಷ್ಠಿಯಲ್ಲಿ ಭಯವಿಲ್ಲದೇ ಸರಳವಾಗಿ, ನೇರವಾಗಿ ಮನಸಿನಾಳಕಿಳಿದರು. 

ಒಂದೂ ಕಾಲು ಗಂಟೆಯ ಕಾಫಿ ಹೀರುವಿಕೆಯ ನಂತರ ಮತ್ತೊಮ್ಮೆ ಸಿಗೋಣ ಎಂದು ಹೇಳಿದರು. ಗಾಡಿ ಇನ್ನೊಂದು ರಸ್ತೆಯ ತಿರುವು ತೆಗೆದುಕೊಳ್ಳುವವರೆಗೂ ನಮ್ಮನ್ನೇ ನೋಡುತ್ತಿದ್ದರು. ಸಮಯ ಬಂದಾಗ ನಿಮಗೂ ಪರಿಚಯಿಸುತ್ತೇನೆ ಅಲ್ಲೀವರೆಗೂ ಸುಮ್ಮನೆ ಕಾಯಿರಿ. ನಾನಿತ್ತ ..... ಮತ್ತೊಂದು ಭೇಟಿಗೆ ಉಸಿರು ಕೈಲಿಡಿದುಕೊಂಡು ಕೂತಿದ್ದರೆ ನಾಲ್ಕು ದಿನಗಳಿಂದ ಈ ಅತ್ತ್ಯಾಪ್ತರು ಕೈಗೂ, ಫೋನಿಗೂ ಸಿಗುತ್ತಿಲ್ಲ. ನಿಮಗೇನಾದರೂ ಸಿಕ್ಕರೆ ಕೈ ಹಿಡಿದುಕೊಂಡು ನನ್ನಲ್ಲಿಗೆ ಕರೆದುಕೊಂಡು ಬನ್ನಿ.


ಪ್ರೇಮಿ
ವಿಜಯನಗರ ಸಾಮ್ರಾಜ್ಯ
ಹತ್ತೋಂಬತ್ತನೇ ರಾಜ ವೀದಿ
ಕೋಟೆ ಬಾಗಿಲು ಸಂಖ್ಯೆ ಒಂದು ಸೊನ್ನೆ ಒಂದು ಏಳು ಬಾರ್ ಮೂರು
ಬೆಂದಕಾಳೂರು.

Comments

  1. ಒಂದು ಅದ್ಭುತವಾದ ಪ್ರೇಮ ನಿವೇದನೆ.. ಶುಭವಾಗಲಿ

    ReplyDelete

Post a Comment