ಕಮರಿತು ಬದುಕು..


ಳಿ ಸಂಜೆಯ ಹೊತ್ತಲ್ಲಿ ಕಟ್ಟಿಗೆ ಆಯಲು ಹೋಗಿದ್ದ ಆ ಆರು ವರ್ಷದ ಬಾಲೆ, ತೆರೆದಿದ್ದ ಕೊಳವೆ ಬಾವಿಯೊಳಗೆ ಕಾಲು ಜಾರಿ ಭೂತಾಯ ಗರ್ಭದೊಳು ಕರಗಿ ಎರಡು ದಿನಗಳೇ ಕಳೆದಿತ್ತು. ಕ್ಷಣಕ್ಷಣವೂ ಆ ಮಗು ಬದುಕಿ ಬರಲಿ ಎಂದು ಬಯಸುತ್ತಿದ್ದ ಕರ್ನಾಟಕದ ಪಾಲಿಗೆ ನಿನ್ನೆಯ ರಾತ್ರಿ ಕರಾಳವಾಗಿತ್ತು. ಸತತ 53ಗಂಟೆಗಳ ಆಕೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ರಕ್ಷಣಾ ತಂಡಗಳು ಆಕೆಯ ದೇಹವನ್ನು ಹೊರ ತೆಗೆವಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಲ್ಲಿಗೆ ಆ ಕನಸು ಕಂಗಳ ಪುಟ್ಟ ಬಾಲೆಯ ಕೊನೆಯಾಸೆಯೂ ಕಮರಿ ಹೋಗಿತ್ತು... 

ವಿಧಿಯೇ ಹಾಗೇ.. 
ಅಕ್ಷರ ಜೋಡಿಸಲು ಹೆಣಗೋ ನನ್ನ ಕೈಗಳಲ್ಲಿ; ಕಟ್ಟಿಗೆ ಆರಿಸೋ ದರ್ದಿರಲಿಲ್ಲ. ಬೇಸಿಗೆಯ ರಜ; ಆಡಿ ಕಳೆಯ ಬೇಕಾದ ಸಮಯವದು. ನನ್ನನಾರೂ ಕಟ್ಟಿಗೆ ಆರಿಸಿಕೊಂಡು ಬಾ ಎಂದು ನೂಕುತ್ತಿರಲಿಲ್ಲ. ನಾನಾಡೋ ಆಟದ ಪರಿಯೇ ಹಾಗೇ... ಹೆತ್ತ ನನ್ನವ್ವ-ಒಡ ಹುಟ್ಟಿರೋ ನನ್ನ ತಮ್ಮನ ಜೊತೆಗಿದ್ದರಷ್ಟೇ ಸಾಕಿತ್ತು. ಅವರ ಜೊತೆ ಆಡಿ ನಲಿಯುತ್ತಾ, ನನ್ನವ್ವನ ಕಣ್ಣುಗಳಲ್ಲಿ ಸಂತಸ ಕಾಣ ಬಯಸಿದ್ದ ನಾನಿಂದು ಅವರನ್ನು ದುಃಖದ ಮಡುವಿನಲ್ಲಿ ದೂಡಿರುವುದರ ಹಿಂದೆ ನನ್ನ ತಪ್ಪೇನಿದೆ..

ನನ್ನವ್ವ ಸವಿತಾ, ಅಪ್ಪ ಅಜಿತ್​ ನಾನವರ ಎರಡನೇ ಮಗಳು ಕಾವೇರಿ. ನನಗೊಬ್ಬ ಅಕ್ಕ ಅನ್ನಪೂರ್ಣ, ತಮ್ಮ  ಪವನ್​. ನಮ್ಮದು ಸುಖೀ ಸಂಸಾರ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ನಮ್ಮ ಕುಟುಂಬವಿದ್ದಿದ್ದು, ಬೆಳಗಾವಿಯ ಅಥಣಿ ತಾಲ್ಲೂಕಿನ ಝುಂಝರವಾಡಾ ಗ್ರಾಮದಲ್ಲಿ. 
ಮೊನ್ನೆ ಅಂದ್ರೆ 22ನೇ ತಾರೀಖು, ನನ್ನ ಕುಟುಂಬದ ಪಾಲಿಗೆ ಕರಾಳ ದಿನ. ಆವತ್ತು ಮುಸ್ಸಂಜೆ 5ಗಂಟೆಯ ಹೊತ್ತಿಗೆ ನನ್ನವ್ವ ನಾನೂ, ನನ್ನ ಪುಟ್ಟ ತಮ್ಮ ಮೂವರೂ ಜೊತೆಗೆ ಕಟ್ಟಿಗೆ ಆಯೋಕೆ ಹೋಗಿದ್ವಿ. ಯಾರಿಗೆ ತಾನೇ ಗೊತ್ತಿತ್ತು ಹೇಳಿ? ಮೃತ್ಯುಕೂಪ ನನ್ನ ಮುಂದೆ ತೆರೆದು ಕುಂತಿದೆ ಎಂದು? ಆಡೋ ಬಾಲೆಯ ಪುಟ್ಟ ಪಾದಗಳ ಪುಟ್ಟ ಪುಟ್ಟ ಹೆಜ್ಜೆಯದ್ದೇನು ತಪ್ಪಿತ್ತು? ಹೇಳಿ.. ಯಾರೋ.. ಕೊರೆಸಿ ಮುಚ್ಚದೇ ತೆರೆದಿಟ್ಟ ಕೊಳವೆ ಬಾವಿಗೆ ಬಿದ್ದಿದ್ದು ನನ್ನ ತಪ್ಪೇ?

ಊಹುಂ.. ನನ್ನದಲ್ಲದ ತಪ್ಪದು. ಶಂಕರ ಹಿಪ್ಪರಗಿಯವರು ಸಣ್ಣನೀರಾವರಿ ಇಲಾಖೆಯಿಂದ ಕೊರೆಸಿದ್ದ ಕೊಳವೆ ಬಾವಿ ಮುಚ್ಚದೇ ತೆರೆದಿಟ್ಟಿದ್ದು ಅವರ ತಪ್ಪು.. ನನಗೆ ನೋವಿದೆ, ನನ್ನವ್ವನ ಕಣ್ಣೀರು ಸತ್ತು ಸ್ವರ್ಗ ಸೇರಿರುವ ನನ್ನ ಮತ್ತೆ ಮತ್ತೆ ಕೊಲ್ಲುತ್ತಿದೆ. ಸಿಟ್ಟು, ಸೆಡವು, ಆಕ್ರೋಶ ನನಗೆ ಕೊಳವೆ ಬಾವಿ ತೋಡಿ, ಮುಚ್ಚದೇ ತೆರೆದಿಟ್ಟವರ ಮೇಲೆ. ನನ್ನವ್ವ-ಅಪ್ಪಯ್ಯನ ಕಣ್​ಗಳಲ್ಲಿ ಕಣ್ಣೀರು ತರಿಸಿದವರ ಮೇಲೆ.. 

53ಗಂಟೆ ನಾನು ಭೂತಾಯ ಗರ್ಭದೊಳಗೇ ಕಳೆದುಬಿಟ್ಟೆ. ಒಂದಷ್ಟು ಹೊತ್ತು ನನ್ನ ಒದ್ದಾಟ ಕೂಗಾಟ ಮೇಲಿದ್ದವರಾರಿಗೂ ಕೇಳಿಸುತ್ತಲೇ ಇರಲಿಲ್ಲ. ನನ್ನವ್ವ ಚೀರುತ್ತಿದ್ದುದು ಕೇಳಿಸುತ್ತಿತ್ತು. ಎಲ್ಲೋ ನನಗೂ ಬದುಕೋ ಆಸೆ ಹುಟ್ಟಿತ್ತು; ಅವರಿವರು ಬಂದು ಪಾತಾಳ ಸೇರಿದ್ದ ನನ್ನ ಸುತ್ತ ಮುತ್ತ ಕೊರೆಯೋ ಹೊತ್ತಿಗೆ. ಆದ್ರೆ, ಕೊನೆಗೂ ಅವರು ಕೊರೆದು ತೆಗೆದದ್ದು ನನ್ನ ಮೃತದೇಹವನ್ನು..

ಅಮ್ಮಾ.. ಚೀರುತ್ತೇನೆ ನಾನು. ನನ್ನ ಮೂಖಧನಿಗೆ ಕಿವಿಗೊಡುವವರಾರೂ ಇಲ್ಲ ಇಲ್ಲಿ. ಆದರೂ ಅತ್ತು ಗೋಳಾಡುತ್ತೇನೆ. ಅಮ್ಮಾ ಕ್ಷಮಿಸೆಂದು. ನಿನ್ನ ಬಿಟ್ಟು ಮರಳಲಾಗದ, ಆವಿಯಲ್ಲಿ ಕರಗಿ ಹೋದ ನನ್ನದಲ್ಲದ ತಪ್ಪಿಗೆ ಕ್ಷಮಿಸೆಂದು ಕಣ್ಣೀರಿಡುತ್ತೇನೆ. ಅಮ್ಮಾ ನಿನ್ನ ಗೋಳಾಟ ನೋಡಲಾಗುತ್ತಿಲ್ಲ. ಅಪ್ಪಾ.. ನಿನ್ನ ಒದ್ದಾಟ ಸಹಿಸಲಾಗುತ್ತಿಲ್ಲ. ನನ್ನ ಒಡಹುಟ್ಟಿದವರ ಬಿಟ್ಟಿರಲಾಗುತ್ತಿಲ್ಲ.. 

ಕಮರಿ ಹೋಯಿತು ನನ್ನ ಕನಸು ಕಂಗಳ ಬದುಕು. ಪುಟ್ಟ ಪುಟ್ಟ ಕಂಗಳಲ್ಲೇ ಅದೆಷ್ಟೋ ಕನಸು ಹೊತ್ತಿದ್ದೆ.. ನನ್ನ ಚಿತೆಗೆ ಬೆಂಕಿ ತಾಗುತ್ತಿದ್ದಂತೆಯೇ ನನ್ನ ಕನಸುಗಳೆಲ್ಲಾ ಸುಟ್ಟು ಕರಕಲಾಗಿದೆ.. ಪ್ಲೀಸ್​ ನಿಮ್ಮಲ್ಲೊಂದಿಷ್ಟು ನನ್ನ ಬೇಡಿಕೆ.. ನನ್ನಂತೆ ಇನ್ನಾರಿಗೂ ಆಗದಿರಲಿ. ನಿಮ್ಮ ಅಕ್ಕ ಪಕ್ಕದಲ್ಲೆಲ್ಲಾದರೂ ತೆರೆದಿಟ್ಟ ಕೊಳವೆ ಬಾವಿಗಳನ್ನು ಮುಚ್ಚಿ ನನ್ನ ಆತ್ಮಕ್ಕೆ ಶಾಂತಿ ಕೊಡಿ. ನಾ  ಮತ್ತೆ ಹುಟ್ಟಿ ನಿಮ್ಮೆಲ್ಲರೊಳಗೊಂದಾಗುತ್ತೇನೆ..
ಇಂತೀ ನಿಮ್ಮ ಪ್ರೀತಿಯ 
-ಕಾವೇರಿ

Comments