ಬದ್ಕೋ ಛಲವೊಂದಿದ್ರೆ, ಇದು ನಮ್ದೇ ಬದ್ಕು
ಈ ಕಾಲದಲ್ಲಿ ಬಯಸಿದ್ದೆಲ್ಲಾ ಬೇಕು ಅನ್ನೋರೆ ಹೆಚ್ಚು. ಒಂದಾದ ಮೇಲೊಂದರಂತೆ ಬೇಕು ಬೇಕು ಅನ್ನೋ ಅತೃಪ್ತ ಭಾವಗಳ ನಡುವೆ ಶೂನ್ಯ ಬಾಳನ್ನು ನಡೆಸುವ ಸಾವಿರಾರು ಜನ ನಮ್ಮ ಸುತ್ತಮುತ್ತಲಲ್ಲೇ ಬದುಕುತ್ತಿದ್ದಾರೆ. ಅಂಥವರ ಬದುಕು ನಿಜಕ್ಕೂ ಶೋಚನೀಯ. ಆದರೆ ಮನುಷ್ಯನಿಗೆ ಬದುಕುವ ಛಲವೊಂದಿದ್ದರೆ ಸಾಕು, ಬದುಕಲು ಸಾವಿರಾರು ಮಾರ್ಗಗಳು ಸಿಗುವುದರಲ್ಲಿ ಸಂದೇಹವೇ ಇಲ್ಲ. ‘ಹುಟ್ಟಿಸಿದೋನಿಗೆ ಹುಲ್ ಮೇಯ್ಸೋದ್ ಗೊತ್ತಿಲ್ವಾ’ ಅನ್ನೋ ಮಾತಿದೆ. ಅದಕ್ಕೊಂದು ಉತ್ತಮ ನಿದರ್ಶನ ನಮ್ಮ-ನಿಮ್ಮ ನಡುವೆಯೇ ಇದ್ದಾರೆ.
ಭಾರತ ಎಷ್ಟೇ ಮುಂದುವರೆದರೂ, ಹೈಫೈ ಬದುಕು ನಡೆಸೋರು ಹೆಚ್ಚಾದರೂ ಅರ್ಧಕರ್ಧ ಜನ ಅಸಹಾಯಕ ಬಡಜೀವಿಗಳಿದ್ದಾರೆ. ಅದರಲ್ಲೊಂದಷ್ಟು ಜನ ಬಣ್ಣದ ಲೋಕವನ್ನೇ ಕಾಣದೇ, ಸುಖ, ಸಂತೋಷ, ನೆಮ್ಮದಿಯನ್ನೇ ಅನುಭವಿಸದೆ ಶೋಚನೀಯ ಬದುಕನ್ನು ಸಾಗಿಸುತ್ತಿದ್ದಾರೆ ಅನ್ನೋದು ಅಕ್ಷರಶ: ಸತ್ಯ. ಐಟಿ-ಬಿಟಿ ಸಿಟಿ ಅಂತ ಬೆಂಗಳೂರು ಮಹಾನಗರ ಕರೆಸಿಕೊಳ್ಳುತ್ತಿದೆಯೆಂದರೆ ಅದಕ್ಕೊಂದಷ್ಟು ರೀಸನ್ಸ್ ಗಳಿವೆ. ಇಲ್ಲಿ ಸಿಗುವ ಉತ್ಪನ್ನಗಳು, ಹೈಟೆಕ್ ವಸ್ತುಗಳನ್ನು ನೋಡಿದರೆ ಬೆಂಗಳೂರು ಮಿನಿ ಅಮೆರಿಕ ಎಂದರೂ ತಪ್ಪಾಗೊಲ್ಲ. ಹಾಗೆಯೇ ಜೀವನೋಪಾಯಕ್ಕೆ ಗತಿಯಿಲ್ಲದೇ ಸಿಲಿಕಾನ್ ಸಿಟಿ ಕಡೆಗೆ ವಲಸೆ ಬರುವ ಜನಗಳಿಗೇನೂ ಕಡಿಮೆ ಇಲ್ಲ. ಬಟ್ ಹೀಗೆ ಬೆಂಗಳೂರಿಗೆ ವಲಸೆ ಬಂದವರು ಹಾಗೋ ಹೀಗೋ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.
ಯಾವುದಾದರೂ ಅಂಗಡಿಯಲ್ಲಿ ನಾವ್ ಕೇಳಿದ್ ಕೊಡೋದು ಒಂದೆರಡು ನಿಮಿಷ ತಡವಾದ್ರೂ ಗಲಾಟೆ ಮಾಡ್ತೀವಿ. ಕೆಲವೊಮ್ಮೆ ಅಗತ್ಯವಿಲ್ಲ ಅಂದ್ರೂ ರೋಡಿಗಿಳಿದು ಪ್ರತಿಭಟಿಸ್ತೀವಿ. ಆದರೆ ಇವರು ಒಂದೊತ್ತಿನ ಊಟಕ್ಕೂ ಹಗಲು-ರಾತ್ರಿ ಎನ್ನದೇ ದುಡಿದು ತಿನ್ಬೇಕು. ರಸ್ತೆಬದಿಯಲ್ಲಿಯೇ ಸಣ್ಣದೊಂದು ಗೂಡನ್ನ ಕಟ್ಟಿಕೊಂಡು ವಾಸ ಮಾಡುತ್ತಿರುವ ಇವರು ಚಾಪೆ, ಕುರ್ಚಿ, ಫ್ಲವರ್ ವಾಜ್, ಬೆಡ್ ಲ್ಯಾಂಡ್, ಪೂಜಾ ಬುಟ್ಟಿ ಹೀಗೆ ನಾನಾ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಾರೆ. ಆದರೆ ಜೀವನ ನಿರ್ವಹಣೆಗೆ ಇದೆಷ್ಟೇ ಸಾಕಾಗುತ್ತಾ ಅನ್ನೋದೇ ಯಕ್ಷಪ್ರಶ್ನೆ. ಹೆಂಡತಿ, ಮಕ್ಕಳೊಂದಿಗೆ ವಲಸೆ ಬಂದ ಇವರಿಗೆ ಯಾವುದೇ ತೊಂದರೆಗಳಿಲ್ಲದೇ ದಿನ ತಳ್ಳೋದೇ ದೊಡ್ಡ ತಲೆನೋವು. ಮಳೆ, ಚಳಿ, ಬಿಸಿಲೆನ್ನದೇ ತಮ್ಮ ಕಂದಮ್ಮಗಳನ್ನು ಫುಟ್ ಪಾತ್ ಗಳಲ್ಲೇ ಮಲಗಿಸುತ್ತಾರೆ. ಓದಿ ಮುಂದೆ ಸುಂದರವಾದ ಬದುಕು ಕಟ್ಟಿಕೊಳ್ಳಬೇಕಾದ ಮಕ್ಕಳು ಹಾಳು ಚರಂಡಿಯಲ್ಲಿ ಕೂತು ಆಡೋದನ್ನ ಕಂಡರೆ ಕಣ್ಣಾಲಿಗಳು ಒದ್ದೆಯಾಗುತ್ತೆ. ಇವರ ಬದುಕನ್ನು ನೋಡಿದ ಎಂತವರ ಕರುಳು ಚುರುಕೆನ್ನದೇ ಇರದು. ಬದುಕು ಎಷ್ಟು ಕಷ್ಟವಾದರೂ ದೇವರು ಕೊಟ್ಟಿದ್ದಿಷ್ಟೇ ಏನ್ಮಾಡೋಕಾಗುತ್ತೆ ಅನ್ನೋ ಇವರ ಮಾತುಗಳಿಗೆ ಮಮ್ಮಲ ಮರುಗದೆ ನಾವಿನ್ನೇನು ಮಾಡೋಕಾಗೊಲ್ಲ.
ಆದರೆ, ಸಣ್ಣ ಸಣ್ಣ ಆಸೆಗಳು ನೆರವೇರಿಲ್ಲ, ಅಪ್ಪ-ಅಮ್ಮ ಕೇಳಿದ್ದು ಕೊಡಿಸಲಿಲ್ಲ, ನನ್ನಿಷ್ಟದಂತೆ ಬದುಕೋಕೆ ಅಟಗ್ಲಿಲ್ಲ ಅಂತ ಕೊರಗೋ ಜನರ ನಡುವೆ ಇಂತವರ ಜೀವನ ಕಥೆ ನಿಜಕ್ಕೂ ಮಾದರಿ. ಪುಟ್ಟ-ಪುಟ್ಟ ವಿಚಾರಗಳಿಗೆ ಬೇಸರ ಮಾಡಿಕೊಂಡು ಸೂಸೈಡ್ ಮಾಡಿಕೊಳ್ಳೋ ಅದೇಷ್ಟೊ ಮಂದಿಗೆ ಈ ಕುಂಟುಂಬಗಳು ಚಿಲುಮೆಯ ಸ್ಫೂರ್ತಿ ಇದ್ದಂತೆ.
Comments
Post a Comment