ನಕ್ಸಲ್ ನಳಿಕೆಯಲ್ಲಿ ಕೆಂಗುಲಾಬಿ…

ನಕ್ಸಲ್ ನಳಿಕೆಯಲ್ಲಿ ಕೆಂಗುಲಾಬಿ…

 ಈಗಾಗ್ಲೇ ನಕ್ಸಲ್ ಹೋರಾಟ ಶುರುವಾಗಿ 5 ದಶಕಗಳೇ ಕಳೆದಿದೆ. ಪಶ್ಚಿಮ ಬಂಗಾಳದ ನಕ್ಸಲ್‍ ಬಾರಿ ಎಂಬ ಪುಟ್ಟ ಹಳ್ಳಿಯಲ್ಲಿ ಸ್ಪೋಟಗೊಂಡ ಪ್ರತಿಭಟನೆಯ ಕಿಡಿ ಇಂದಿಗೂ ಉರಿಯುತ್ತ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿದೆ. 1967ರಲ್ಲಿ ಆರಂಭವಾದ ಚಳವಳಿ ಬಳಿಕ ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಕರ್ನಾಟಕ ಮತ್ತು ಛತ್ತೀಸಗಡದಲ್ಲೂ ಹಬ್ಬಿತು. ಸಮ ಸಮಾಜದ ಹಂಬಲದಿಂದ ಈ ನಕ್ಸಲ್ ಚಳುವಳಿ ಆರಂಭವಾಯ್ತು.  

50 ವರ್ಷಗಳಲ್ಲಿ ನಕ್ಸಲ್ ಹೋರಾಟ ಏನಾದರೂ ಬದಲಾವಣೆ ತಂದಿದೆಯೇ ಎಂದು ಹಿಂತಿರುಗಿ ನೋಡಿದರೆ ಸಿಗುವ ಉತ್ತರ ಶೂನ್ಯ. ಏಳು- ಬೀಳುಗಳ ನಡುವೆ ಸಾಗಿರುವ ನಕ್ಸಲ್ ಚಳವಳಿ ಪರಿಶಿಷ್ಟರು, ದುರ್ಬಲರು ಹಾಗೂ ಆದಿವಾಸಿ ಯುವಕರ ತಲೆ ಕೆಡಿಸಿದೆ. ಹಸಿವು- ಬಡತನ, ಅಸಮಾನತೆ ಕೋವಿಗಳನ್ನು ಹಿಡಿಯುವಂತೆ ಪ್ರೇರೇಪಿಸಿದೆ. ನಕ್ಸಲರು ಭಯೋತ್ಪಾದಕರಲ್ಲ. ಅವರಿಗೊಂದು ಒಳ್ಳೆಯ ಗುರಿ ಇದೆ. 

ಕಿಚ್ಚಿನ ಎದೆ ಗೂಡಲ್ಲಿ ಅರಳಿದ ಕೆಂಗುಲಾಬಿ….

ಹೀಗೆ ಸಮ ಸಮಾಜಕ್ಕಾಗಿ ವ್ಯವಸ್ಥೆಯ ವಿರುದ್ಧ ಹೋರಾಡಲು ಆ ಜೋಡಿಗಳು ಹಿಡಿದಿದ್ದು ಇದೇ ನಕ್ಸಲ್ ಹಾದಿಯನ್ನ. ಈ ಹೊರಳು ಹಾದಿಯಲ್ಲಿ ಅದ್ಯಾವ ಘಳಿಗೆಯಲ್ಲಿ ಏನಾಯ್ತೊ ಆ ಜೋಡಿಗಳು ತಾಜ್ ಮಹಲ್ ಒಳಗೆ ಎಂಟ್ರಿ ಕೊಟ್ಟು ಬಂಧಿಯಾಗಿ ಬಿಟ್ಟರು. ಕಾಡು-ಮೇಡು, ಗಿರಿ-ಕಂದರ, ನದಿ-ತೊರೆಗಳಿಂದ ತುಂಬಿ ತುಳುಕುವ ಪ್ರದೇಶದಲ್ಲಿ ಪ್ರೇಮದ ಸುಳಿಗೆ ಸಿಕ್ಕಿ ಬಿದ್ದರು.

ನೆತ್ತರಿನಲ್ಲಿ ಅರಳಿದ ಅಮರ ಪ್ರೇಮ ಕಥೆ ಇದು. ಆ ಜೋಡಿ ನಕ್ಸಲ್ ಎಂಬ ಪಟ್ಟ ಕಂಟ್ಟಿಕೊಂಡವರು. ಅವರು ಚಿಕ್ಕಮಗಳೂರು ಜೆಲ್ಲೆಯ ಕಳಸ ಮೂಲದವರು. ಕನ್ಯಾಕುಮಾರಿ ಹಾಗೂ ಶಿವು ಕಳೆದ ಹಲವು ವರ್ಷಗಳಿಂದ ನಕ್ಸಲಿಸಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. 2003 ರಲ್ಲಿ ಶಿವು ಹಾಗೂ ಕನ್ಯಾಕುಮಾರಿ ಪರಿಚಯವಾಗಿತ್ತು. ಬಳಿಕ ಕೆಲ ವರ್ಷಗಳ ಕಾಲ ಇಬ್ಬರಿಗೂ ಸಂಪರ್ಕವಿರಲಿಲ್ಲ. ಮತ್ತೆ 2008 ರಲ್ಲಿ ಕನ್ಯಾಕುಮಾರಿ ಹೆಲ್ತ್ ಅಪ್ಸೆಟ್ ಆಗಿತ್ತು. ಆಗ ಕನ್ಯಾಕುಮಾರಿ ಮತ್ತು ಶಿವು ಮತ್ತೊಮ್ಮೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಕನ್ಯಾಕುಮಾರಿ ಶುಶ್ರೂಶೆ ಮಾಡಿದ ಶಿವುಗೆ ಅವಳ ಮೇಲೆ ಒಲವಾಗಿದೆ. ದಿನ ಕಳೆದಂತೆ ಇಬ್ಬರಲ್ಲೂ ಪ್ರೇಮಾಂಕುರವಾಗಿ ಕೊನೆಗೆ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ರು.. ಈಗ ಈ ಕಪಲ್ಸ್ ಗೆ 6 ತಿಂಗಳ ಮುದ್ದಾದ ಗಂಡು ಮಗು ಇದೆ. ತಲೆ ಮರೆಸಿಕೊಂಡು ಜೀವನ ನಡೆಸುತ್ತಿದ್ದ ಈ ಜೋಡಿಗಳು ಈಗ ಮಗುವಿನ ಭವಿಷ್ಯಕ್ಕಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಕಳೆದ ಸೋಮವಾರ ಚಿಕ್ಕಮಗಳೂರಿನಲ್ಲಿ ಶರಣಾದರು. ಇವರೊಂದಿಗೆ ಚೆನ್ನಮ್ಮ ಎಂಬಾಕೆಯೂ ಶರಣಾಗಿದ್ದಾಳೆ.

ಈ ಮೂಲಕ ಕಾಡಿನ ವಾಸದ ಹೋರಾಟದ ಹಾದಿಗೆ ಅಂತ್ಯ ಹಾಡಿದ್ದಾರೆ. ಆದರೆ ಮಗುವಿನ ತಾಯಿ ಕನ್ಯಾಕುಮಾರಿ ವಿರುದ್ಧ ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಲ್ಲಿ 33 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಶರಣಾಗತಿಯ ಪ್ರಕ್ರಿಯೆಯೇನೊ ಪೂರ್ಣಗೊಂಡಿದೆ. ಆದರೆ ಪೊಲೀಸರು ಕನ್ಯಾಕುಮಾರಿಯನ್ನು ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ. ಪತಿ ಶಿವು ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗದ ಕಾರಣ ಸಮಾಜದ ಮುಖ್ಯವಾಹಿನಿಯಲ್ಲಿ ಜೀವನ ಸಾಗಿಸಬಹುದು. ಅಲ್ದೆ ಮಗು ಗೆಲುವಿಗೆ ತಾಯಿಯ ಆಶ್ರಯ ಅನಿವಾರ್ಯವಾದ ಕಾರಣ 6 ತಿಂಗಳ ಕಂದಮ್ಮ ಜೈಲಿನಲ್ಲಿಯೇ ತಾಯಿಯ ಜೊತೆ ಇರಬೇಕಾದ ಅನಿವಾರ್ಯತೆ ಇದೆ. 

ಅಂತೂ ಕಂದಮ್ಮನಿಗಾಗಿ ಮುಖ್ಯವಾಹಿನಿಗೆ ಬರೋ ಧೈರ್ಯ ಮಾಡಿದ ದಂಪತಿಗಳು ಸಂಘರ್ಷದ ಹಾದಿಗೆ ಅಂತ್ಯ ಹಾಡಿ, ನಾಡಿನ ಬದುಕಿಗೆ ನಾಂದಿ ಹಾಡಿದ್ದಾರೆ. ಆದರೆ ಹೆತ್ತವರು ಮಾಡಿದ ತಪ್ಪಿಗೆ ಜಗತ್ತನ್ನೇ ಅರಿಯದ ಹಸುಗೂಸು ಜೈಲಿನ ಕರಾಳ ಕೋಣೆಯಲ್ಲಿ ದಿನದೂಡುವ ದುಸ್ಥಿತಿ ಎದುರಾಗಿರೋದು ವಿಪರ್ಯಾಸವೇ ಸರಿ.

Comments