'ಚಿಟ್ಟಾಣಿ' ಇನ್ನು ನೆನಪು ಮಾತ್ರ

ಚಿರನಿದ್ರೆಗೆ ಜಾರಿದ ಮೇರು ಕಲಾವಿದ ಚಿಟ್ಟಾಣಿ

ಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನು ನೆನಪು ಮಾತ್ರ. ಮೇರು ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನರಾಗಿದ್ದಾರೆ. ಚಿಟ್ಟಾಣಿ ಅವರು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ.

84 ವರ್ಷ ವಯಸ್ಸಿನ ಚಿಟ್ಟಾಣಿ ಉಸಿರಾಟ ಸಮಸ್ಯೆಯಿಂದ ಕಳೆದ ನಾಲ್ಕು ದಿನಗಳಿಂದ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಶ್ವವಾಯುವಿಗೂ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 9.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರು ಇನ್ನಿಲ್ಲವಾದರು ಅವರು ಬಿಟ್ಟು ಹೋದ ಕುರುಹುಗಳು ಯಕ್ಷಗಾನ ಕ್ಷೇತ್ರದಲ್ಲಿ ಶಾಶ್ವತವಾಗಿರಲಿದೆ.

ಚಿಟ್ಟಾಣಿಯವರ ಕಿರು ಪರಿಚಯ
 

ಬಡಗುತಿಟ್ಟು ಯಕ್ಷಗಾನ ಕಲಾವಲಯದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ, ಆಕರ್ಷಕ ನಾಟ್ಯ ಶೈಲಿ, ವೈವಿಧ್ಯಮಯ ಭಾವತರಂಗಗಳಿಂದ ಸಾರ್ವಭೌಮರೆಂದೆನಿಕೊಂಡಿರುವ ಮೇರು ಕಲಾವಿದರು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ಆರು ದಶಕಗಳಿಗೂ ಮಿಕ್ಕಿದ ಸುಧೀರ್ಘವಾದಂತಹ ಕಲಾಬದುಕಿನಲ್ಲಿ ಸಾಧನೆಯ ಉತ್ತುಂಗವನ್ನೇರಿದವರು. ತಮ್ಮ ಇಳಿ ವಯಸ್ಸಿನಲ್ಲೂ ಗೆಜ್ಜೆ ಕಟ್ಟಿ ರಂಗಸ್ಥಳವನ್ನೇರಿ 20ರ ತರುಣನಂತೆ ಕುಣಿಯುತ್ತಿದ್ದರು.

ಇತ್ತೀಚೆಗೆ ಬಂಗಾರಮಕ್ಕಿಯಲ್ಲಿ ನವರಾತ್ರಿ ಅಂಗವಾಗಿ ನಡೆದ ಶ್ರೀದೇವಿ ಮಹಾತ್ಮ ಪ್ರಸಂಗದಲ್ಲಿ ವಿದ್ಯುನ್ಮಾಲಿಯಾಗ ಚಿಟ್ಟಾಣಿಯವರು ಅಭಿನಯಿಸಿದ್ದರು.. ಅವರ ಅಬಿನಯ ಅಭಿಮಾನಿಗಳ ಕಣ್ಣಿನಲ್ಲಿ ಹಚ್ಚ ಹಸಿರಾಗಿದೆ.

ಕೀಚಕ, ಬಸ್ಮಾಸುರ, ಕೌರವ, ಕಾರ್ತವೀರ್ಯ, ಉಗ್ರಸೇನ, ಸುಂದರ ರಾವಣ, ಗದಾಯುದ್ಧದ ಕೌರವ, ರಾಜಾ ಬ್ರಹದೃತ, ಸಾಂಗ್ಯಾ, ದುಷ್ಟಬುದ್ಧಿ, ರುದ್ರಕೋಪ, ಕಲಾಧರನಾಗಿ ರಂಗಸ್ಥಳಕ್ಕೆ ಬಂದರೆ ಸಹಸ್ರ ಸಹಸ್ರ ಸಂಖ್ಯೆಯ ಪ್ರೇಕ್ಷಕ ಸಮುದಾಯ ಬೆಕ್ಕಸ ಬೆರಗಾಗುತ್ತದೆ. ಚಿಟ್ಟಾಣಿಯವರ ನಾಟ್ಯ, ಅಭಿನಯ, ವೇಷ ಎಂಥವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ಕರಾವಳಿ, ಮಲೆನಾಡಿನ ಜನರ ಮೇಲಷ್ಟೇ ಈ ಪರಿಣಾಮವಲ್ಲ. ದೇಶ-ವಿದೇಶಗಳಲ್ಲೂ ತನ್ನ ಹಿರಿಮೆಯನ್ನು ಪ್ರಕಟಿಸಿ ಮೆರೆದ ಮಹಾನ್ ಕಲಾವಿದ ಚಿಟ್ಟಾಣಿಯವರು.

ಬಾಲ್ಯದಲ್ಲೇ ವೇಷ ಕಟ್ಟಿ ರಂಗ ಪ್ರವೇಶಿಸಿದ ಚಿಟ್ಟಾಣಿ ಆಯಾ ಕಾಲದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತಮ್ಮ ತಾರಾ ಪಟ್ಟವನ್ನು ಕಾದುಕೊಂಡಿದ್ದಾರೆಂದರೆ ಅತಿಶಯವಲ್ಲ.

ಜನವರಿ 1,1933ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಜನಿಸಿದ್ದ ಅವರು ಎರಡನೇ ತರಗತಿಗೆ ಶಾಲೆ ಬಿಟ್ಟಿದ್ದರು. ಚಿಟ್ಟಾಣಿಯವರು ಯಕ್ಷಗಾನ ಪ್ರವೇಶಿಸಿದ್ದು ಅವರ ಹದಿನಾಲ್ಕರ ಪ್ರಾಯದಲ್ಲಿ. ಅಂದರೆ ಸರಿ ಸುಮಾರು 68 ವರ್ಷಗಳಿಂದ ಈ ರಂಗದಲ್ಲಿ ಅನುಭವ ಹೊಂದಿದ್ದಾರೆ. ಆರಂಭದಲ್ಲಿ ಒಂದೆರಡು ವರ್ಷ ಮಾತ್ರಾ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿರಬಹುದಾದರು ನಂತರ ಗುರ್ತಿಸಲ್ಪಡುವ ಸ್ಥಾನವನ್ನು ಗಳಿಸಿಕೊಂಡರು. ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಬಹುಪ್ರಿಯರಾದರು. ಮೇಳಗಳ ಅತಿಮುಖ್ಯ ಅನಿವಾರ್ಯ ಕಲಾವಿದರಾದರು. ಅಪಾರ ಅಭಿಮಾನಿಗಳ ಮನ ಸೂರೆಗೊಂಡರು. ಒಮ್ಮೆ ಈ ಕ್ಷೇತ್ರವನ್ನು ಆಯ್ದುಕೊಂಡ ಮೇಲೆ ಏರಿಳಿತಗಳನ್ನು ಕಂಡಿರಬಹುದಾದರೂ ಎಂದೂ ವಿಮುಖರಾಗಿರಲಿಲ್ಲ. ಮತ್ತೊಂದು ಕ್ಷೇತ್ರದ ಕಡೆ ಯೋಚಿಸಲಿಲ್ಲ. ಯಕ್ಲರಂಗದಲ್ಲೇ ತಪಸ್ಸುಗೈದು ಸಾಧನೆ ಮಾಡಿದ ಮಹಾನ್ ವ್ಯಕ್ತಿ.

ಚಿಟ್ಟಾಣಿಯವರು ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯ. ಭಟ್ಟರ ನಿರ್ದೇಶನದಲ್ಲಿ 'ಕೃಷ್ಣಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಯಕ್ಷಗಾನಕ್ಕೆ ಮೊದಲ ಪದ್ಮ ಪ್ರಶಸ್ತಿ ದಕ್ಕಿಸಿಕೊಂಡ ಕೀರ್ತಿ ಅವರದ್ದು.

ಚಿಟ್ಟಾಣಿ ಅರಸಿ ಬಂದ ಪ್ರಶಸ್ತಿಗಳು:
1991 – ರಾಜ್ಯೋತ್ಸವ ಪ್ರಶಸ್ತಿ
2004 – ಜನಪದಶ್ರೀ
2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
2009 – ಶಿವರಾಮ ಕಾರಂತ ಪ್ರಶಸ್ತಿ
2012 – ಪದ್ಮಶ್ರೀ
2012 – ಆಳ್ವಾಸ್ ನುಡಿಸಿರಿ ಪ್ರಶಸ್ತಿ
2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ


ಸಾವಿರಾರು ಸನ್ಮಾನಗಳ ಸರದಾರ

ಚಿಟ್ಟಾಣಿಯವರು ಎಂದೂ ಪ್ರಶಸ್ತಿ, ಸನ್ಮಾನಗಳನ್ನು ಬಯಸಿದ ಕಲಾವಿದರಲ್ಲ. ಚಿಟ್ಟಾಣಿಯವರು ಮೊದಲ ಸನ್ಮಾನವನ್ನು ಪಡೆದದ್ದು ತಮ್ಮ ಇಪ್ಪತ್ತರ ಹರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಾಳೆಗದ್ದೆಯಲ್ಲಿ. ನಂತರ ಅರೆ ಅಂಗಡಿ ಎಂಬಲ್ಲಿ ಅಂದಿನ ಮಹೋನ್ನತ ಕಲಾವಿದರಾದ ದಿ|| ಕೆರೆಮನೆ  ಶಿವರಾಮ ಹೆಗಡೆಯವರಿಂದ ಐದು ಸಾವಿರ ರುಪಾಯಿ ನಿಧಿಯೊಂದಿಗೆ ಪಡೆದ ಸನ್ಮಾನ ಅವಿಸ್ಮರಣೀಯ ಎಂದು ಅವರೇ ಹೇಳಿದ್ದಾರೆ. ಇನ್ನು ಮುಂಬೈ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದ ನಗರಗಳಲ್ಲಿ ಪಡೆದ ಸನ್ಮಾನಗಳು ಲೆಕ್ಕವಿಲ್ಲದಷ್ಟು.  ದಕ್ಷಿಣ - ಉತ್ತರ ಕರ್ನಾಟಕ, ಹೊರರಾಜ್ಯಗಳಲ್ಲಿ ಕೂಡ ಇವರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಲ್ಲೆಲ್ಲಾ ಸನ್ಮಾನಗಳಾಗಿವೆ.

ಚಿಟ್ಟಾಣಿಯವರ ಕುರಿತು ಅಧ್ಯಾಯನ

ಇಬ್ಬರು ಸಂಶೋಧಕರು ಚಿಟ್ಟಾಣಿಯವರ ಕುರಿತಾಗಿ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ.


ಆರು ದಶಕಗಳಿಗೂ ಹೆಚ್ಚು ಕಾಲ ಕಲಾಬದುಕಿನಲ್ಲಿ ಸಾಧನೆಯ ಉತ್ತುಂಗವನ್ನೇರಿದ ಚಿಟ್ಟಾಣಿಯವರು ತಮ್ಮ ಇಳಿ ವಯಸ್ಸಿನಲ್ಲಿಯೂ ಗೆಜ್ಜೆ ಕಟ್ಟಿ ತರುಣರನ್ನೂ ನಾಚಿಸುವಂತಹ ಪ್ರದರ್ಶನವನ್ನು ನೀಡಿದ್ದರು. ಮಹಾನ್ ಕಲಾವಿದ ಚಿಟ್ಟಾಣಿಯವರನ್ನು ಕಳೆದುಕೊಂಡ ಜನತೆ ಈಗ ಶೋಕಸಾಗರದಲ್ಲಿ ಮುಳುಗಿದ್ದಾರೆ. ಯಕ್ಷರಂಗದಲ್ಲಿ ಮಿಂಚಿದ ಚಿಟ್ಟಾಣಿ ಮರೆಯಾಗಿರುವುದು ಯಕ್ಷಲೋಕಕ್ಕೆ ತುಂಬಲಾರದ ನಷ್ಟ.

Comments