ಸೀವೆಟ್ ಕಾಫಿ; ಸಖತ್ ಕಾಸ್ಟ್ಲಿ..!

ಸುವಾಸನೆ ಭರಿತ ಪುನುಗು ಬೆಕ್ಕು ಮಲದಿಂದ ಕಾಫಿ ಪುಡಿ…?!

ಒಂದು ಕಾಫಿ ರೇಟ್ ಅಬ್ಬಬ್ಬಾ ಅಂದ್ರೆ ಐಯ್ದರಿಂದ ಹದಿನೈಯ್ದು ರುಪಾಯಿ ಇರುತ್ತೆ. ಇಲ್ಲ ದೊಡ್ಡ ಹೋಟೆಲ್ ಅಥವಾ ಕೆಫೆಗಳಲ್ಲಿ  ಹೆಚ್ಚೆಂದ್ರೆ ನೂರರಿಂದ ಇನ್ನೂರು ರೂಪಾಯಿ ಇರಬಹುದು. ಆದರೆ ಇಲ್ಲೊಂದು ಬಗೆಯ ಕಾಫಿ ಇದೆ. ಅದು ನಾಲಿಗೆ ಜೊತೆಗೆ ಕಿಸೆಯನ್ನೂ ಸುಡುತ್ತೆ. ಅದು ಕೊಪಿ ಲುವಾಕ್ ಅಥವಾ ಸಿವೆಟ್ ಕಾಫಿ. ಕನ್ನಡದಲ್ಲಿ ಪುನುಗು ಕಾಫಿ ಎನ್ನಬಹುದು. ಇದರ ಬೆಲೆ ಎಷ್ಟು ಗೊತ್ತಾ…??? ಕೇಳಿದ್ರೆ ಮೂರ್ಛೆ ಬೀಳೋದು ಗ್ಯಾರೆಂಟಿ.. ಒಂದು ಕಪ್ ಸಿವೆಟ್ ಕಾಫೀ $10 ಡಾಲರ್..

ಆಶ್ಚರ್ಯ ಆಗ್ತಿದೀಯಾ…! ಇದು ಸತ್ಯ… ವಿಶ್ವದ ಅತ್ಯಂತ ದುಬಾರಿ ಬೆಲೆಯ ಈ ಸೀವೆಟ್ ಕಾಫಿಯನ್ನು ಉತ್ಪಾದನೆಗೆ ಭಾರತ ಮುಂದಾಗಿದೆ.

ಸುವಾಸನೆ ಸೂಸುವ ಕಸ್ತೂರಿ ಮೃಗದ ಬಗ್ಗೆ ಕೇಳದವರೇ ಇಲ್ಲ. ಅದೇ ರೀತಿ ಸುಗಂಧ ಹೊರ ಸೂಸುವ ಇನ್ನೊಂದು ಪ್ರಾಣಿಯೇ ಪುನುಗು ಬೆಕ್ಕು. ಇದು ನೋಡಲು ಮುಂಗೂಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿಯಾಗಿದ್ದು, ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದೆ. ಮೈಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ. ಇದರ ಗ್ರಂಥಿಯಿಂದ ಘಮಘಮ ಸುಗಂಧ ದ್ರವ್ಯ ಬಿಡುಗಡೆ ಆಗುತ್ತದೆ. ಎಲ್ಲೋ ಕಲರ್ ಇರುವ ಸುವಾಸನೆ ಯುಕ್ತ ಮೂತ್ರ ಜೇನಿನಂತಿರುತ್ತದೆ. ಇದನ್ನು ಸೆಂಟ್ ಗಳಲ್ಲಿ ಪರಿಮಳ ಹೆಚ್ಚಿಸಲು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಪುನುಗು ಬೆಕ್ಕಿನ ಮೂತ್ರಕ್ಕೆ ವಿಪರೀತ ಬೇಡಿಕೆ ಇದೆ. ಅದೇರೀತಿ ಮೈ ಮೇಲಿನ ಉಣ್ಣೆಗರಿಗಳಿಂದಲೂ ಪುನುಗು ಬೆಕ್ಕು ಹೆಸರುವಾಸಿ.



ಈ ಪುನುಗು ಬೆಕ್ಕಿನ ಕಾಫಿ ಜಗತ್ತಿನಲ್ಲೆ ಕಾಸ್ಟ್ಲೀಯಸ್ಟ್. ಇದೀಗ 
ಕಾಫಿ ಬೆಳೆ ಮತ್ತು ರಫ್ತು ಮಾಡುವ ಏಷ್ಯಾದ 3ನೇ ಸ್ಥಾನದಲ್ಲಿರುವ ಭಾರತ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಈ ಸಿವೆಟ್ ಕಾಫಿ ಪುಡಿ ತಯಾರಿಸಲಿದೆ.. ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್(ಸಿಸಿಸಿ) ಎಂಬ ಸಂಸ್ಥೆ ತಯಾರಿ ಆರಂಭಿಸಿದೆ. ಸದ್ಯ ಆರಂಬಿಕವಾಗಿ ಕಡಿಮೆ ಪ್ರಮಾಣದಲ್ಲಿ ಕಾಫಿ ಉತ್ಪಾದನೆ ಮಾಡುವುದಾಗಿ ಕಂಪನಿ ಹೇಳಿದೆ.


ಕಾಫಿ ಇತಿಹಾಸ
10ನೇ ಶತಮಾನದಲ್ಲಿ. ಮೊದಲಿಗೆ ಕಾಫಿಯ ಸ್ವಾದವನ್ನು ಸವಿದವರು ಇಥಿಯೋಪಿಯಾ ಜನರು. ಇಥಿಯೋಪಿಯಾದಲ್ಲಿ ಈಗಿರುವ ಒರೊಮೊ ಬುಡಕಟ್ಟು ಜನರ ಪೂರ್ವಜರು ಕಾಫಿಯಲ್ಲಿನ ಗುಣಗಳನ್ನು ಅರಿತು ಅಂತ ಹೇಳಲಾಗಿದೆ. ಆದರೆ ಇದರ ಕಾಫಿಯ ಇತಿಹಾಸದತ್ತ ಗಮನ ಹರಿಸುವುದಾದರೆ, ಇದರ ಘಮವನ್ನು ಜಗದಗಲ ಹರಡಿಸಿದ ಕೀರ್ತಿ ಇಸ್ಲಾಂ ಜಗತ್ತಿಗೆ ಸಲ್ಲುತ್ತದೆ. ಅದರಲ್ಲೂ ಯೆಮನ್ನಿನ ಸೂಫಿ ಸಂತರು ಇದನ್ನು ಹೆಚ್ಚಾಗಿ ಬಳಸುತ್ತಿದ್ದರು. ಕಾಫಿಯಲ್ಲಿದ್ದ ಔಷಧೀಯ ಗುಣ ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತಿತ್ತಂತೆ.

1500ರ ವೇಳೆಗೆ ಸೂಫಿ ಪಂಥದೊಂದಿಗೆ ಗುರುತಿಸಿಕೊಂಡಿದ್ದ ಪ್ರದೇಶಗಳಲ್ಲೆಲ್ಲ ಕಾಫಿ ಬೆಳೆಯಲಾಗುತ್ತಿತ್ತು. ಈ ಕಾಫಿಯಲ್ಲಿ ಉದ್ದೀಪನ ಅಂಶವಿದೆ ಅನ್ನೋ ಆರೋಪವೂ ಇತ್ತು. ಕೆಲ ರಾಷ್ಟ್ರಗಳಲ್ಲಿ ಆಗ ಇದನ್ನು ನಿಷೇಧಿಸಿದ್ದರು ಕೂಡ. ಕಾಫಿ ಹಿಂದೆ ಕ್ವಾವ್ಹಾ ಎಂದು ಕರೆಯುತ್ತಿದ್ದರು. ಕಾಲಾಂತರದಲ್ಲಿ ಕಾಫಿ ಘಮ ಇಡೀ ಜಗತ್ತಿಗೇ ಪಸರಿಸಿತು.

ಈಗ ಕೇಳ್ಬೇಕಾ ವೆರೈಟಿ ವೆರೈಟಿ ಕಾಫಿ ಸಿಗುತ್ತೆ. ಕೋಲ್ಡ್‌ ಕಾಫಿ, ಬ್ಲಾಕ್‌ ಕಾಫಿ, ಸ್ಪೈಸ್ಡ್‌ ಕಾಫಿ, ಎಸ್‌ಪ್ರೆಸ್ಸೋ ಕಾಫಿ ಇತ್ಯಾದಿ, ಇತ್ಯಾದಿ.. ಕಾಫಿ ಬೀಜಗಳಲ್ಲೂ ಈಗ ಹಲವು ಬಗೆ. ಕಾಫಿಯನ್ನು ಇಷ್ಟ ಪಡದವರೇ ಇಲ್ಲ ಬಿಡಿ. ಕಾಫಿ ಬೀಜವನ್ನು ಹದವಾಗಿ ಹುರಿದು, ಪುಡಿ ಮಾಡಿ ಗಟ್ಟಿ ನೊರೆ ಹಾಲಿನೊಂದಿಗೆ ಬೆರೆಸಿ, ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ಕುಡಿದರಂತೂ ಸ್ವರ್ಗವೇ ಧರೆಗಿಳಿದಂತೆ.

Comments