ಆವತ್ತೂ ಹೀಗೆ.. ಇಡೀ ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೆ.. ಅಪ್ಪನ ನೋಡಲು ಮುಂಜಾನೆಯೇ ಹೊರಟು ನಿಂತಿದ್ದೆ.. ಒಳಗೊಳಗೇ ನೋವು ನುಂಗುತ್ತಿದ್ದ ನನ್ನ ತಾಯಿಯೂ ನನಗೆ ಬೀಳ್ಕೊಟ್ಟಿದ್ದಳು. ಮಾರ್ಕೆಟ್'ನತ್ತ ನನ್ನ ಪ್ರಯಾಣ ಹೊರಟಿತ್ತು.. ಆ ಹೊತ್ತು ನನ್ನಪ್ಪನ ಕಾವಲುಗಾರನಾಗಿದ್ದ ನನ್ನ ಮಾವ ಅದೇನೋ ತುಂಬಾ ಮುಖ್ಯವಾದ ಕೆಲಸವಿದೆ ಅಂತ ಮನಸ್ಸಿಲ್ಲದ ಮನಸ್ಸಿನಿಂದಲೇ ನನ್ನನ್ನು ಬೀಳ್ಕೊಟ್ಟಿದ್ದರು. ನಿದ್ದೆಯೂ ಬಾರದೇ, ಉಸಿರಾಡಲೂ ಆಗದೇ ಮೂರು ದಿನ ನರಳಿದ್ದ ಜನಕ ನನ್ನ ಬರುವಿಕೆಗಾಗೇ ಕಾಯುತ್ತಿದ್ದರು.. ಅವರ ಕಣ್ಣಿಗೆ ನಾ ಬಿದ್ದ ಕೊಡಲೇ ಕೇಳಿದ್ದೊಂದೆ; ಮನೆಗೆ ಕರ್ಕೊಂಡು ಹೋಗು ಪುಟ್ಟಾ ಇನ್ನು ನನ್ ಕೈಯಲ್ಲಿ ಆಗಲ್ಲ. ದುಡ್ಡು ಕಮ್ಮಿ ಇದ್ರೆ ನನ್ನ ಪ್ಯಾಂಟ್ ಜೇಬಲ್ಲಿ 500 ರೂಪಾಯಿ ಇದೆ ನೋಡು ಎಂದಿದ್ದರು.. ಅದಾಗಲೇ ಅಪ್ಪನನ್ನು ಕಳೆದುಕೊಳ್ಳಲಾಗದ ಸಂಕಟಕ್ಕೆ ಊರು ತುಂಬಾ ಸಾಲ ಮಾಡಿದ್ದೆವು.. ಡಾಕ್ಟರ್'ಗಾಗಿ ರಿಸೆಪ್ಶನ್'ನಲ್ಲಿ ಕಣ್ಮುಚ್ಚಿ ಕಾಯುತ್ತಿದ್ದಾಗ ನಮ್ಮೊಂದಿಗೆ ಆಡಿ- ಬೆಳೆದ, ಒಂದೇ ತಟ್ಟೆಯಲ್ಲಿ ಅನ್ನ-ಅಂಬಲಿ ಕುಡಿದಿದ್ದ ನನ್ನ ಸಂಬಂಧಿ ಬಂದು ನನಗೆ ಧೈರ್ಯ ತುಂಬಲಾರಂಭಿಸಿದ.. ಬಿಲ್ ಕಟ್ಟಿ ಬೇಗ ಡಿಸ್ಚಾರ್ಜ್ ಮಾಡಿ ಅಂತ ಬೇಡಿದರೂ ಬಿಡದ ವೈದ್ಯರು ನನ್ನಪ್ಪನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದರು.. ಹಾಗೂ ಹೀಗೂ ಕಷ್ಟಪಟ್ಟು ಆಸ್ಪತ್ರೆಯಿಂದ ಮಧ್ಯಾಹ್ನ ಸುಮಾರು 2-2.15ಕ್ಕೆ ಮನೆಯತ್ತ ಹೊರಟೆವು.. ದಾರಿಯುದ್ಧಕ್ಕೂ ಮಾತನಾಡಲಾಗದಿದ್ದರೂ ನನ್ನಪ್ಪ ನನ್ನ ಕೇಳಿದ್ದೊಂದೆ, ಅಮ್ಮನನ್ನ ನೋಡಬೇಕೆಂದು.. ಆದ್ರೆ ನನ್ನಜ್ಜಿಗೆ ತಾಯಿ ಹೃದಯವೇ ಇರಲಿಲ್ಲ.. ಹು.. ಹು.. ಎನ್ನುತ್ತಲೇ ಮನೆ ಗೇಟ್ ತಲುಪಿದೆವು.. ನನ್ನಮ್ಮ ಮತ್ತು ಮನೆಯನ್ನು ನೋಡುತ್ತಲೇ ತೃಪ್ತಿಗೊಂಡ ನನ್ನಪ್ಪ ಬಾಗಿಲಲ್ಲೇ ಕುಸಿದು ಬಿದ್ದರು.. ನನ್ನ ಕೈ ಹಿಡಿದುಕೊಂಡೇ ನನ್ನನಗಲಿದರು..
ಪಪ್ಪ.. ಇದು ನೀನಿಲ್ಲದ ಹೊತ್ತು. ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ್ಸು ನಿನ್ನದು.. ನನ್ನ ಕೈ ಹಿಡಿದು ಅಕ್ಷರವ ಬರೆಸಿ, ಶಾಲೆಯ ದಾರಿಯುದ್ದಕ್ಕೂ ಕಥೆ ಹೇಳುತ್ತಿದ್ದೆ. ನನ್ನ ಅಗಲುವ ದಿನವೂ ಮಳೆ ನೀರಿನ ಕಥೆ ಹೇಳಿದ್ದೆ. ನನಗೀಗ ಪದೇ ಪದೇ ನಿನ್ನದೇ ನೆನಪು. ನಾನು ಅಧೈರ್ಯಗೊಂಡಾಗ, ಅಸಮಾಧಾನಿ ಆದಾಗ, ಹಲಬುಗೆಟ್ಟ ಕಂದನಂತಾದಾಗ ಸಮಾಧಾನದ ಮಾತುಗಳನ್ನ ಹೇಳಿ ನನ್ನಲ್ಲಿ ಚೈತನ್ಯ ತುಂಬಿಸುತ್ತಿದ್ದ ನಿನ್ನ ಕೊರತೆ ಸಾಕಷ್ಟಿದೆ. ಮಡುಗಟ್ಟಿದ ದು:ಖ ಹನಿಗೂಡಿದಾಗ ನಿನ್ನ ಪಂಚೆಯೇ ನನಗಾಸರೆಯಾಗುತ್ತಿತ್ತು. ಆದರೆ, ಈಗ……………………………..
Comments
Post a Comment